ಕೆಂಜು ಮೊಡವೆ  

ಕೆಲವು ಮಧ್ಯವಯಸ್ಕರಲ್ಲಿ ಕಾಣಬರುವ ಒಂದು ಚರ್ಮವ್ಯಾಧಿ (ಆಕ್ನಿ ರೊಸೇóಸಿಯ). ಗಂಡಸರಿಗಿಂತ ಹೆಂಗಸರಲ್ಲಿ ಇದು ಸಾಮಾನ್ಯ. ಮೂಗು ಮತ್ತು ಕೆನ್ನೆಗಳು ಮೊದಲಿಗೆ ಕೆಂಪೇರುತ್ತವೆ. ಅನಂತರ ಕೆಂಪೇರಿದ ಚರ್ಮದ ಮಧ್ಯೆ ಕೆಲವು ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಈ ಸ್ಥಿತಿ ಅದೇ ರೀತಿ ನಿಂತರೆ ಮೊಡವೆಗಳ ಸುತ್ತಲೂ ದೊಡ್ಡದಾದ ಲೋಮನಾಳಗಳು ಕಾಣಿಸಿಕೊಳ್ಳುತ್ತವೆ. ಈ ವ್ಯಾಧಿಯ ಕಾರಣಗಳು ಹಲವಾರು: ಸಾರಾಯಿ ಸೇವನೆ, ಬಿಸಿ ಬಿಸಿ ಆಹಾರವನ್ನು ನುಂಗುವುದು, ಮಸಾಲೆ ಊಟ, ಜಠರಕ್ಕೆ ರಕ್ತಚಲನೆ ಹೆಚ್ಚಿಸುವ ಪದಾರ್ಥಗಳ ಸೇವನೆ, ಜಠರದ ವ್ಯಾಪಾರದ ಬದಲಾವಣೆ, ಗ್ರಂಥಿಗಳ ವ್ಯಾಪಾರದ ಬದಲಾವಣೆ, ಚಿಂತಾಕುಲ ಮನ:ಸ್ಥಿತಿ ಇತ್ಯಾದಿ.

	ರೋಗಿ ಸ್ವಲ್ಪ ಸ್ವಲ್ಪ ಆಹಾರ ಸೇವಿಸುವುದರಿಂದಲೂ ಚುರುಕಾದ, ಅತಿ ಪುಷ್ಟಿ ಆಹಾರವನ್ನು ತ್ಯಜಿಸುವುದರಿಂದಲೂ ಮಾನಸಿಕವಾಗಿ ಸಮತೋಲವನ್ನು ಕಾಯ್ದಿಟ್ಟುಕೊಳ್ಳುವುದರ ಮೂಲಕವೂ ಮುಖ ಕೆಂಪೇರುವುದನ್ನೂ ಕೆಂಜುಮೊಡವೆಯನ್ನೂ ಹಿಡಿತದಲ್ಲಿಡಬಹುದು.      
  (ಡಿ.ಪಿ.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ